ಮೊಬೈಲ್ ಗಳ ಮಾಹಿತಿ ಕುರಿತು ತಿಳಿದುಕೊಳ್ಳಿ
ಜಂಗಮವಾಣಿ ಅಥವಾ ಸಂಚಾರಿ ದೂರವಾಣಿ (ಮೊಬೈಲ್ ಫೋನ್ - Mobile Phone ):
ಜಂಗಮವಾಣಿ ಅಥವಾ ಸಂಚಾರಿ ದೂರವಾಣಿ (ಮೊಬೈಲ್ ಫೋನ್) ಎಂದು ನಮಗೆಲ್ಲಾ ಪರಿಚಯವಾಗಿ, ನಮ್ಮ ಜೀವನದ ಪ್ರತಿಕ್ಷಣದ ಅವಿಭಾಜ್ಯ ಅಂಗವಾಗಿರುವ ಮಹತ್ತರ ಸಾಧನವಾಗಿದೆ. ಮೊದಲು ದೂರವಾಣಿ ಕರೆ ಮಾಡಲು ಬಳಕೆಯಾಗುತ್ತಿತ್ತು. ದೂರವಾಣಿಯು ತಂತಿ ಆಧಾರಿತ ಸೇವೆಯಾಗಿತ್ತು. ತಂತ್ರಜ್ಞಾನ ಬೆಳೆದಂತೆಲ್ಲಾ ತಂತಿರಹಿತ ಸೇವೆ ಲಭ್ಯವಾಯಿತು. ಕರೆ (Call) ಮತ್ತು ಸಣ್ಣ ಸಂದೇಶ (SMS) ಕಳುಹಿಸಲು ಮೊಬೈಲ್ ಫೋನ್ ಬಳಕೆಗೆ ಬಂದಿತು. ಮೊದಲೆಲ್ಲಾ ಮೊಬೈಲ್ ಲಭ್ಯತೆಯ ಕೊರತೆಯಿಂದ ಮತ್ತು ಕರೆ ಮಾಡಲು ಅಷ್ಟೇನೂ ಅಗ್ಗವಲ್ಲದ ಸಾಧನವಾಗಿತ್ತು. ಮೊಬೈಲ್ ಫೋನ್ ಎಂದರೆ ಕೇವಲ ದುಡ್ಡಿದ್ದವರು ಬಳಸುವ ಸಾಧನ ಎನ್ನುವಂತೆ ಇತ್ತು. ಆದರೆ ವರುಷಗಳು ಕಳೆದ ಹಾಗೆ ವಿವಿಧ ರೀತಿಯ ಸೇವೆಗಳಿಂದ ಮತ್ತು ಹಲವು ಸೇವಾ ಪೂರೈಕೆದಾರರ ಪೈಪೋಟಿಯಿಂದ ಸಾಕಷ್ಟು ಜನರಿಗೆ ತಲುಪಲು ಸಾಧ್ಯವಾಯಿತು. ಸ್ಥಿರ ದೂರವಾಣಿಗೆ (Land Phone) ಹೋಲಿಸಿದಾಗ ಜಂಗಮವಾಣಿ (Mobile Phone) ಬಹಳಷ್ಟು ಧನಾತ್ಮಕ ವೈಶಿಷ್ಟ್ಯತೆಗಳನ್ನು ಹೊಂದುತ್ತ ಜನಪ್ರಿಯ ಸಾಧನವಾಯಿತು.
ಮೊದಲೆಲ್ಲಾ ಕೇವಲ ಕರೆ, ಸಣ್ಣ ಸಂದೇಶ, ಕ್ಯಾಲ್ಕುಲೇಟರ್, ಕ್ಯಾಲೆಂಡರ್, ಒಂದಿಷ್ಟು ಆಟಗಳು ಹೀಗೆ ಹಲವು ಅಷ್ಟೇನೂ ವೈಶಿಷ್ಟ್ಯತೆಗಳು ಇರಲಿಲ್ಲ. ಹಾಗೆಯೇ ಸಂಪೂರ್ಣ ಪರದೆಯು ಇರುತ್ತಿರಲಿಲ್ಲ. ಪರದೆಯು ಕೂಡ ಚಿಕ್ಕದೇ ಆಗಿತ್ತು ಮತ್ತು ಸಂಖ್ಯೆಗಳನ್ನು ಕೀಲಿಮಣೆ ಮೂಲಕ ಒತ್ತಬೇಕಾಗಿತ್ತು. ಡೇಟಾ ಸೇವೆಯು ಇನ್ನೂ ಅಷ್ಟು ಪ್ರಚಲಿತವಾಗಿಲ್ಲ. ಮುಂದೆ ಹೊಸ ತಂತ್ರಜ್ಞಾನ ಬಂದಂತೆ ಟಚ್ ಸ್ಕ್ರೀನ್ ಮೊಬೈಲ್ ಫೋನ್ ಗಳು ಬಳಕೆಗೆ ಬಂದವು, ಇವುಗಳು ಡೇಟಾ ಸೇವೆಯನ್ನು ಬಳಸುತ್ತಿದ್ದರಿಂದ ಸಾಕಷ್ಟು ವಿಶೇಷ ಚಟುವಟಿಕೆಗಳನ್ನು ಮಾಡಲು ಅನುವು ಮಾಡಿಕೊಟ್ಟಿತು. ಸ್ಮಾರ್ಟ್ ಫೋನುಗಳು ಬಂದನಂತರ ನಾವು ಕಂಪ್ಯೂಟರ ನಿಂದ ಮಾಡಬಹುದಾದಂತಹ ಚಟುವಟಿಕೆಗಳನ್ನು ಮೊಬೈಲ್ ಫೋನ್ ಮೂಲಕ ಮಾಡಲು ಸಾಧ್ಯವಾಯಿತು.
ಮೊಬೈಲ್ ಫೋನ್ ವಿಧಗಳು:
ಮೊಬೈಲ್ ಗಳನ್ನು ವಿವಿಧ ರೀತಿಯ ಆಧಾರದ ಮೇಲೆ ವರ್ಗೀಕರಣ ಮಾಡಬಹುದು. ಮೊಬೈಲ್ ಗಳಲ್ಲಿ ಬಳಸುವ ಆಪರೇಟಿಂಗ್ ಸಿಸ್ಟಮ್ ಮೂಲಕ ವಿಂಗಡಿಸುವುದು ಆದರೆ ಆ್ಯಂಡ್ರಾಯ್ಡ್ ಆ್ಯಪಲ್ IOS, ಸಿಂಬಿಯನ್, ಬ್ಲಾಕ್ ಬೆರ್ರಿ ಮತ್ತು ಇತರೆ. ಅವುಗಳು ಬಳಸುವ ನೆಟ್ ವರ್ಕ್ ತಂತ್ರಜ್ಞಾನದ ಮೇಲೆ ವರ್ಗೀಕರಣ ಮಾಡುವುದಾದರೆ 3G,4G ಮತ್ತು ಈಗ ಬರುತ್ತಿರುವ 5G ಫೋನುಗಳು ಎಂದು ಹೇಳಬಹುದು.
ಮೊಬೈಲ್ ಫೋನ್ ಗಳನ್ನು ಅವುಗಳ ವೈಶಿಷ್ಟ್ಯತೆಗಳ ಮೇಲೆ ವಿಂಗಡಿಸುವುದಾದರೆ ಬೇಸಿಕ್ ಫೋನ್ ಮತ್ತು ಸ್ಮಾರ್ಟ್ ಫೋನ್ ಎಂದು ಹೀಗೆ ವಿಂಗಡಿಸಬಹುದು. ಸ್ಮಾರ್ಟ್ ಫೋನ್ ಗಳು ಬಗೆಬಗೆಯ ವಿಶೇಷಗಳನ್ನು (Specifictions) ಒಳಗೊಂಡಿರುವ ಕಾರಣ ಅವುಗಳಲ್ಲಿ ಹಲವಾರು ಮಾದರಿಗಳು ಲಭ್ಯವಿವೆ.
ಯಾವ ರೀತಿಯ ಮೊಬೈಲ್ ಫೋನ್ ನಿಮಗೆ ಸೂಕ್ತ?
ಮೊಬೈಲ್ ಇವತ್ತು ಕೇವಲ ಸಂವಹನ ನಡೆಸುವ ಸಾಧನ ಅಷ್ಟೇ ಆಗಿ ಉಳಿದಿಲ್ಲ. ವಿವಿಧ ರೀತಿಯ ಅಭಿರುಚಿಗಳನ್ನು ಅವರಿಗೆ ಅಷ್ಟೇ ವಿಧವಾದ ವೈಶಿಷ್ಟ್ಯಗಳನ್ನು ಮತ್ತು ವಿಶೇಷಣಗಳನ್ನು ಹೊತ್ತು ಬರುತ್ತದೆ. ಕೆಲವರು ಇದನ್ನು ಐಷಾರಾಮಿಯ ಸಂಕೇತವೆಂದು ಅತಿ ದುಬಾರಿ ಮೊಬೈಲ್ ಫೋನ್ ಗಳನ್ನು ಖರೀದಿಸುವುದು ಒಂದು ವಿಶೇಷವಾಗಿದೆ. ಪ್ರತಿಯೊಂದು ಸ್ಮಾರ್ಟ್ ಫೋನ್ ಕರೆ ಮತ್ತು ವಿವಿಧ ರೀತಿಯ ಸಂವಹನ ನಡೆಸುವ ವೈಶಿಷ್ಟ್ಯತೆಯನ್ನು ಹೊಂದಿದೆ, ಆದರೆ ನೀವು ಉದ್ಯೋಗ/ವೃತ್ತಿ, ಹವ್ಯಾಸಗಳು, ಜೀವನಶೈಲಿ ಹಾಗೂ ಇತರ ಆಸಕ್ತಿಗಳಿಗನುಗುಣವಾಗಿ ಮೊಬೈಲ್ ಫೋನನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಒಳ್ಳೆಯ ಕ್ಯಾಮರಾ, ಮಲ್ಟಿಟಾಸ್ಕಿಂಗ್, ರಫ್ ಅಂಡ್ ಟಫ್ ಉಪಯೋಗ ಹೀಗೆ ನಿಮಗೆ ಇಷ್ಟವಾಗಿರುವ ವೈಶಿಷ್ಟ್ಯತೆ ಆಧಾರದ ಮೇಲೆ ನೀವು ಸ್ಮಾರ್ಟ್ ಫೋನ್ ಆಯ್ಕೆ ಮಾಡಿಕೊಳ್ಳಬಹುದು.
ಮೊಬೈಲ್ ಸ್ಮಾರ್ಟ್ ಆಗಿದೆ, ಮತ್ತೆ ನೀವು?
ಹೌದು, ಇತ್ತೀಚೆಗೆ ಬರುವ ಮೊಬೈಲ್ ಫೋನ್ ಸ್ಮಾರ್ಟ್ ಫೋನ್ ಎಂದು ಕರೆಯಲ್ಪಟ್ಟಿತು. ಅದು ಕೂಡ ಅಷ್ಟೇ ಸ್ಮಾರ್ಟ್ ಆಗಿದೆ. ಆದರೆ ಅದನ್ನು ಬಳಸುವ ನಾವು ಎಷ್ಟು ಸ್ಮಾರ್ಟ್ ಆಗಿದ್ದೀವಿ, ಎನ್ನುವುದು ಕೂಡ ಅಷ್ಟೇ ಮುಖ್ಯ. ಮೊಬೈಲ್ ಫೋನಿನ ಸಂಪೂರ್ಣ ವೈಶಿಷ್ಟ್ಯತೆಗಳನ್ನು ಅರಿತರೆ ಅದನ್ನು ನಾವು ಸಮರ್ಪಕವಾಗಿ ನಮ್ಮ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬಹುದು. ಆದರೆ ಬಹುಪಾಲು ಜನ ಸ್ಮಾರ್ಟ್ ಫೋನಿನ ಮಾಹಿತಿಯನ್ನು ವಿಷಯವನ್ನು ಅರಿಯದೆ ಕೇವಲ ಕೆಲವೇ ಕೆಲವು ವೈಶಿಷ್ಟ್ಯತೆಗಳಲ್ಲಿ ತಮ್ಮನ್ನು ಸೀಮಿತ ಪಡಿಸಿಕೊಂಡು ಅದರಲ್ಲಿ ಸಂಪೂರ್ಣ ಸಮಯ ಕಳೆಯುತ್ತಾರೆ. ಇದರಿಂದ ಚಟುವಟಿಕೆ ಮಾಡಲು ತೊಂದರೆಯಾಗಬಹುದು ಅಥವಾ ಅವರು ಅಂದುಕೊಂಡಿರುವ ಸಾಧನೆಯನ್ನು ಪೂರೈಸಲು ಮೊಬೈಲ್ ಫೋನ್ ಕೂಡ ತೊಡಕಾಗಬಹುದು. ಹೀಗಾಗಿ ಮೊಬೈಲ್ ಫೋನಿನ ವಿವಿಧ ರೀತಿಯ ವೈಶಿಷ್ಟ್ಯಗಳನ್ನು ಸರಿಯಾಗಿ ಅರಿತು ಬಳಸಿಕೊಂಡಾಗ ಅದು ನಮಗೆ ಕೆಲಸ ಮಾಡಲು ಅನುಕೂಲವಾಗುತ್ತದೆ.
ಪ್ರತಿಯೊಂದು ಸ್ಮಾರ್ಟ್ ಫೋನ್ ಡಿಫಾಲ್ಟ್ ಫ್ಯಾಕ್ಟರಿ ಸೆಟ್ಟಿಂಗ್ಸ್ ನೊಂದಿಗೆ ನಮ್ಮ ಕೈ ಸೇರುತ್ತದೆ. ಆದರೆ ನಾವು ನಮಗೆ ತಕ್ಕಂತೆ ಸಂಯೋಜನೆಗಳನ್ನು ಬದಲಾವಣೆ ಮಾಡಿಕೊಂಡು ಸರಿಯಾಗಿ ಬಳಸಿಕೊಳ್ಳಬಹುದು. ಉದಾಹರಣೆಗೆ ಡಿಫಾಲ್ಟ್ ಆಗಿ ನಾರ್ಮಲ್ ಫಾಂಟ್ ಮೊಬೈಲ್ ನಲ್ಲಿ ಇರುತ್ತದೆ, ಆದರೆ ನಾವು ನಮ್ಮ ಪಾಲಕರಿಗೆ ಈ ಫೋನನ್ನು ಉಪಯೋಗಿಸಲು ಕೊಡುತ್ತೀವಿ ಎಂದಾದರೆ ಅವರಿಗೆ ನಾವು ದೊಡ್ಡ ಫಾಂಟ್ ಆಯ್ಕೆಮಾಡಿ ಸಂಯೋಜಿಸಿ ಕೊಡಬಹುದು. ಇದರಿಂದ ಅವರಿಗೆ ಮೊಬೈಲ್ ಪರದೆ ಮೇಲೆ ಬರುವ ಅಕ್ಷರಗಳನ್ನು ಓದಲು ಸಹಾಯವಾಗುತ್ತದೆ. ಇದೇ ರೀತಿ ವಿವಿಧ ರೀತಿಯ ಪ್ರಯೋಜನಗಳನ್ನು ಒಮ್ಮೆ ಅವಲೋಕಿಸಿ ನಮಗೆ ಬೇಕಾದ ಹಾಗೆ ಪರಿವರ್ತಿಸಿಕೊಂಡರೆ (Customize) ನಾವು ಸಮರ್ಥವಾಗಿ ಮೊಬೈಲನ್ನು ಬಳಸಲು ಶಕ್ತರಾಗುತ್ತೇವೆ.
ಮೊಬೈಲ್ ಫೋನ್ ಸಮರ್ಪಕ ಬಳಕೆ ಹೇಗೆ?
ಇದು ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರು ತಮಗೆ ತಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಕ್ಷಣಕ್ಷಣವೂ ಬದಲಾಗುತ್ತಿರುವ ಜಗತ್ತಿನಲ್ಲಿ ಸ್ಮಾರ್ಟ್ ಫೋನ್ ನಮಗೆ ಒಂದು ವಿಷಯದಲ್ಲಿ ಸಂಪೂರ್ಣವಾಗಿ ನಮ್ಮನ್ನು ಕಳೆದುಹೋಗುವಂತೆ ಮಾಡಬಲ್ಲದು. ಉದಾಹರಣೆಗೆ ಬೆಳಗಿನಿಂದ ರಾತ್ರಿಯವರೆಗೆ ನಾವು ಸ್ಮಾರ್ಟ್ ಫೋನ್ ನಲ್ಲಿ ಚಾಟ್, ಚಿತ್ರಗಳು, ವೀಡಿಯೋಗಳು, ಮತ್ತು ಇನ್ನಿತರೆ ಫಾರ್ವರ್ಡ್ ಸಂದೇಶಗಳು, ವಾಟ್ಸಪ್, ಫೇಸ್ ಬುಕ್, ಇನ್ಸ್ಟಾ ಗ್ರಾಮ್ ಕಡೆಗೆ ಗಮನಹರಿಸಿ ಪೂರ್ತಿದಿನ ಹಾಳಾಗಬಹುದು. ಅದರ ಬದಲು ಚಟುವಟಿಕೆಗಳನ್ನು ನಿರ್ದಿಷ್ಟ ಸಮಯಕ್ಕೆ ಸೀಮಿತಗೊಳಿಸಿ ನಮ್ಮ ವೈಯಕ್ತಿಕ ಮತ್ತು ವೃತ್ತಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮೊಬೈಲ್ ಫೋನ್ ಮೂಲಕ ಮಾಡಬಹುದು. ಬೆಳಗಿನ ಜಾವ ವಿವಿಧ ಆ್ಯಪ್ ಗಳ (Apps) ಸಹಾಯದಿಂದ ಯೋಗಾಸನ, ಧ್ಯಾನ ಮತ್ತು ಇತರೆ ಲೈವ್ ತರಗತಿಗಳನ್ನು ತೆಗೆದುಕೊಳ್ಳಬಹುದು. ಆನ್ ಲೈನ್ ಶಿಕ್ಷಣವನ್ನು ಮಾಡಬಹುದು, ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಜಗತ್ತಿಗೆ ತಿಳಿಸಬಹುದು. ಹೀಗೆ ನಿಮ್ಮಲ್ಲಿರುವ ಒಂದಿಲ್ಲೊಂದು ಹವ್ಯಾಸಕ್ಕೆ ಮೊಬೈಲ್ ಸಂಪೂರ್ಣ ಪೂರಕವಾಗುತ್ತದೆ. ಆದಾಗ್ಯೂ ನಾವು ಒಟ್ಟಾರೆ ಸ್ಮಾರ್ಟ್ ಫೋನ್ ಗಳಲ್ಲಿ ಕಳೆಯುವ ಸಮಯಕ್ಕೆ ಒಂದು ಮಿತಿಯನ್ನು ಹಾಕಿಕೊಂಡು ಬಳಸುವುದು ಒಳ್ಳೆಯದು. ನಾವು ಹೆಚ್ಚು ಮೊಬೈಲ್ ಫೋನ್ ಬಳಸಿದಷ್ಟು ನಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು.
ಮೊಬೈಲ್ ಆ್ಯಪ್ಸ್ (Mobile Apps)
ಮೊಬೈಲ್ ಅಪ್ಲಿಕೇಶನ್ (Mobile Application) ಎನ್ನುವುದು ಮೊಬೈಲ್ ಸಾಧನದಲ್ಲಿ ಚಲಾಯಿಸಲು ವಿನ್ಯಾಸಗೊಳಿಸಲಾದ ಒಂದು ರೀತಿಯ ಅಪ್ಲಿಕೇಶನ್ ಆಗಿದೆ. ಯಾವುದೇ ಸ್ಮಾರ್ಟ್ ಫೋನ್ ಖರೀದಿಸಿದಾಗಲು ಒಂದಿಷ್ಟು ಅಪ್ಲಿಕೇಶನ್ ಗಳು Default ಆಗಿ ಬಂದಿರುತ್ತವೆ. ಮೂಲಭೂತ ಕೆಲಸ ಮಾಡಲು ಫೋನಿನ ವೈಶಿಷ್ಟ್ಯತೆಗಳು ಮತ್ತು ಕೆಲವು ಆ್ಯಪ್ ಗಳು ಸಾಕಾಗುತ್ತದೆ. ಆದರೆ ನಮಗೆ ಬೇಕಾದ ಮತ್ತು ನಿಖರವಾದ ಚಟುವಟಿಕೆಗಳನ್ನು ಮಾಡಲು ಮನರಂಜನೆಗಾಗಿ, ವಿವಿಧ ಹವ್ಯಾಸಗಳಿಗೆ, ಆಟ ಆಡಲು, ಏನಾದರೂ ಹೊಸದನ್ನು ಕಲಿಯಲು, ಪ್ರಯಾಣ, ಶಾಪಿಂಗ್, ಕ್ರೀಡೆ, ಸುದ್ದಿ ಸಮಾಚಾರ, ಮಕ್ಕಳಿಗಾಗಿ, ಸಾಮಾಜಿಕ ಜಾಲತಾಣ, ಕಾರ್ಯಕ್ಷಮತೆಗಾಗಿ, ಸುರಕ್ಷತೆಗಾಗಿ, ಹೊಸ ವೈಶಿಷ್ಟ್ಯತೆಗಳನ್ನು ಪಡೆಯಲು, ಹೀಗೆ ಹತ್ತು ಹಲವು ವಿನೂತನ ಕಾರ್ಯಗಳಿಗಾಗಿ ಹಲವಾರು ಅಪ್ಲಿಕೇಶನ್ ಗಳು ಲಭ್ಯವಿವೆ. ಸಾಕಷ್ಟು ಜನಪ್ರಿಯ ಅಪ್ಲಿಕೇಶನ್ ಗಳು ಉಚಿತವಾಗಿ ಲಭ್ಯವಿವೆ. ಮತ್ತು ಇನ್ನು ಕೆಲವು ಅಪ್ಲಿಕೇಶನ್ ಗಳು ಹಣ ಪಡೆದು ಸೇವೆ ಪಡೆಯುವಂತಹುಗಳಾಗಿವೆ. ಹೀಗೆ ಎಷ್ಟೊಂದು ಅಪ್ಲಿಕೇಶನ್ ಗಳು ಲಭ್ಯವಿದ್ದರೂ ನಿಮಗೆ ಬೇಕಾದ ಅಪ್ಲಿಕೇಶನ್ ಗಳನ್ನು ಮಾತ್ರ ಇನ್ ಸ್ಟಾಲ್ ಮಾಡಿಕೊಂಡು ಉಪಯೋಗಿಸಿಕೊಳ್ಳುವುದು ಒಳ್ಳೆಯದು.
Reviewed by Admin
on
ಸೆಪ್ಟೆಂಬರ್ 28, 2023
Rating:

ಕಾಮೆಂಟ್‌ಗಳಿಲ್ಲ