ಬ್ಯಾಂಕ ಖಾತೆಯ ವ್ಯವಹಾರ ವಿವರಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ

 ಖಾತೆಯ ವ್ಯವಹಾರ ವಿವರಗಳು (Account Transactions ): 

     ಈ ವಿಭಾಗದಿಂದ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಾಡಿರುವ ಎಲ್ಲಾ ವ್ಯವಹಾರಗಳ ವಿವರಗಳು ಸಿಗುತ್ತವೆ.  ಇತ್ತೀಚಿನ, ಈ ವರ್ಷದ, ಕಳೆ‍ದ ವರ್ಷದ, ಅಥವಾ ಇನ್ನೂ ಹಳೆಯ ವಿವರಗಳು ಇಲ್ಲಿ ಲಭ್ಯ. ಅವುಗಳನ್ನು ನೀವು ಪರದೆಯ (Screen) ಮೇಲೆ ನೋಡಬಹುದು.  ಮತ್ತು ಬೇಕೆಂದರೆ ವಿವರಗಳನ್ನು ವಿವಿಧ ರೂಪಗಳಲ್ಲಿ ಡೌನಲೋಡ್ (Download) ಮಾಡಿಕೊಳ್ಳಬಹುದು.  ಯಾವುದಾದರೊಂದು ವಿಷಯಕ್ಕಾಗಿ ನೀವು ‍ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಸ್ಟೇಟ್ ಮೆಂಟ್ (Statement) ಕೇಳಿದರೆ ಸ್ವಯಂ ನೀವೇ ನೆಟ್ ಬ್ಯಾಂಕಿಂಗ್ ಸಹಾಯದಿಂದ ಡೌನಲೋಡ್ (Download) ಮಾಡಿಕೊಂಡು ಅವರಿಗೆ ಕೊಡಬಹುದು.  ಹಲವಾರು ಬ್ಯಾಂಕುಗಳು ಈ ಸ್ಟೇಟ್ ಮೆಂಟ್ (Statement) ಸೇವೆಯನ್ನು ಕೊಡುತ್ತವೆ. ನಿಮಗೆ ಬೇಕಾದ ಸಮಯಕ್ಕೆ ಉದಾಹರಣೆಗೆ ಪ್ರತಿ ತಿಂಗಳಿಗೊಮ್ಮೆ ನಿಮ್ಮ ಖಾತೆಯಲ್ಲಿ ಮಾಡುವ ವ್ಯವಹಾರಗಳನ್ನು ಈ ಸ್ಟೇಟ್ ಮೆಂಟ್ (Statement) ಮೂಲಕ ಮಿಂಚಂಚೆಗೆ ಬರುತ್ತವೆ.

ಹಣ ‍ವರ್ಗಾವಣೆ (Fund Transfer):

     ಈ ವಿಭಾಗವನ್ನು ಬಳಸಿಕೊಂಡು ಮತ್ತೊಬ್ಬರಿಗೆ ಹಣವನ್ನು ಕಳುಹಿಸಬಹುದು.  ಸಾಮಾನ್ಯವಾಗಿ ಬೇರೆಯವರ ಖಾತೆಗೆ ಮೂರು ವಿಧಾನದಲ್ಲಿ ಹಣ ವರ್ಗಾವಣೆ ಸಾಧ್ಯವಿದೆ.  ಮೊದಲನೆಯದು ತ್ವರಿತ ವರ್ಗಾವಣೆ, ಎರಡನೆಯದು ನಿಮ್ಮದೇ ಬ್ಯಾಂಕಿನ ಮತ್ತೊಂದು ಖಾತೆಗೆ ಮತ್ತು ಮೂರನೆಯದು ಬೇರೆ ಬ್ಯಾಂಕಿನ ಖಾತೆಗೆ.  ತ್ವರಿತ ವರ್ಗಾವಣೆ, ವಿಭಾಗದ ಸಹಾಯದಿಂದ ಮತ್ತೊಬ್ಬರ ಖಾತೆಗೆ ಒಮ್ಮೆ ಮಾತ್ರ ಅಥವಾ ಯಾವಾಗಲೊಮ್ಮೆ ಹಣ ವರ್ಗಾವಣೆ ಮಾಡುವ ಸಮಯದಲ್ಲಿ ಬಳಸಬಹುದು.  ಬೇರೆಯವರ ಖಾತೆಯ ವಿವರಗಳನ್ನು ಕೊಡುವ ಮೂಲಕ ಐ.ಎಂ.ಪಿ.ಎಸ್ (IMPS) ಅಥವಾ ಬೇರೆ ವಿಧಾನಗಳಿಂದ ಹಣ ವರ್ಗಾವಣೆ ಸಾಧ್ಯವಿದೆ.  ಎರಡನೇ ವಿಧಾನದಲ್ಲಿ ನಿಮ್ಮದೇ ಬ್ಯಾಂಕಿನ ಒಳಗಿನ ನಿಮ್ಮದೇ ಮತ್ತೊಂದು ಖಾತೆಗೆ ಅಥವಾ ಬೇರೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಬಹುದು.  ಇದಕ್ಕಾಗಿ ಮೊದಲು ನೀವು ಯಾರ ಖಾತೆಗೆ ಹಣ ವರ್ಗಾವಣೆ ಮಾಡಲು ಬಯಸುತ್ತೀರೋ ಅವರ ಖಾತೆಯ ವಿವರಗಳನ್ನು 'Add Beneficiary' ಅಂದರೆ ಫಲಾನುಭವಿಯಾಗಿ ಸೇರಿಸಬೇಕು.  ಸಾಮಾನ್ಯವಾಗಿ ಕೆಲವು ಗಂಟೆಗಳ ನಂತರ ಫಲಾನುಭವಿ ಸೇರಿಕೆ ಯಶಸ್ವಿಯಾಗುತ್ತದೆ.  ಅದಾದ ನಂತರ ಫಲಾನುಭವಿ ಖಾತೆಗೆ ಹಣ ವರ್ಗಾವಣೆ ಮಾಡಬಹುದು.  ಹಾಗೆಯೇ ಒಂದೇ ಸಲ ಗರಿಷ್ಠ ಎಷ್ಟು ಮೊತ್ತವನ್ನು ಕಳಿಸಲು ಇಚ್ಛಿಸುತ್ತೀರೋ ಅನ್ನುವುದನ್ನು ನಿಗದಿ ಮಾಡಬಹುದು.  ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ನೀವು ಕಳಿಸಬೇಕೆಂದುಕೊಂಡರೆ ಅದನ್ನು ಶೆಡ್ಯೂಲ್ (Schedule) ಕೂಡ ಮಾಡಬಹುದು. ಉದಾಹರಣೆಗೆ ನಿಮ್ಮ ಪಾಲಕರಿಗೆ, ಮಕ್ಕಳಿಗೆ, ಕೆಲಸ ಮಾಡುವವರಿಗೆ, ಮತ್ತು ಇತರೆ ಪ್ರತಿ ತಿಂಗಳು ಪಾವತಿಗಾಗಿ ಶೆಡ್ಯೂಲ್ (Schedule) ವಿಧಾನವನ್ನು ಬಳಸಬಹುದು.  ಮೂರನೆಯದಾಗಿ ಬೇರೆ ಬ್ಯಾಂಕಿನ ನಿಮ್ಮದೇ ಅಥವಾ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು.  ಇಲ್ಲಿಯೂ ಕೂಡ ಮೇಲೆ ತಿಳಿಸಿದಂತೆ ಫಲಾನುಭವಿಯನ್ನು ಸೇರಿಸಬೇಕು.  ಈ ವಿಧಾನದಲ್ಲಿ ಬೇರೆಯವರ ಖಾತೆಗೆ IMPS, NEFT, RTGS ಇತರೆ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಸಾಧ್ಯ.  ಹಣ ವರ್ಗಾವಣೆಯ ವಿಧಾನಗಳಲ್ಲಿ ಕೆಲವೊಂದು ಉಚಿತ ಮತ್ತು ಕೆಲವು ವಿಧಾನಗಳಿಗೆ ಶುಲ್ಕ ಇರಬಹುದು.  ನಿಮ್ಮ ಬ್ಯಾಂಕಿನೊಂದಿಗೆ ಅದನ್ನು ವಿಚಾರಿಸಿ.

ಬಿಲ್ಲುಗಳ ಪಾವತಿ (Bill Pay):

     ಪ್ರತಿ ತಿಂಗಳು ಬರುವ ವಿವಿಧ ಬಿಲ್ ಗಳನ್ನು ನೀವು ಇಲ್ಲಿಂದ ಪಾವತಿಸಬಹುದು.  ವಿದ್ಯುತ್ ಬಿಲ್, ನೀರಿನ ಬಿಲ್, ದೂರವಾಣಿ, ಮತ್ತು ಇನ್ನು ಹಲವಾರು ಬಿಲ್ಲುಗಳ ಪಾವತಿಯನ್ನು ಇಲ್ಲಿಂದ ಮಾಡಬಹುದು.  ಇನ್ನೊಂದು ಅನುಕೂಲಕರ ಅಂಶವೇನೆಂದರೆ 'ಸ್ವಯಂ ಚಾಲಿತ ಬಿಲ್ಲು ಪಾವತಿ’ ವಿಧಾನವನ್ನು ಸಂಯೋಜನೆಗೊಳಿಸಿದರೆ ಪ್ರತಿ ತಿಂಗಳು ಬಿಲ್ ಉತ್ಪಾದನೆ ಆದ ನಂತರ, ನಿಮ್ಮ ಖಾತೆಯಲ್ಲಿರುವ ನಗದನ್ನು/ಹಣವನ್ನು ಬಳಸಿಕೊಂಡು ಬಿಲ್ ಪಾವತಿಸಲ್ಪಡುತ್ತದೆ. 

ಸ್ಥಿರ ಠೇವಣಿ (Fixed Deposit)

     ಈ ವೈಶಿಷ್ಟ್ಯತೆಯ ಸಹಾಯದಿಂದ ನೆಟ್ ಬ್ಯಾಂಕಿಂಗ್ ಬಳಸಿಕೊಂಡು ನಾವಿರುವ ಜಾಗದಿಂದಲೇ ಠೇವಣಿಗಳನ್ನು ಇಡಬಹುದು.  ಅಂದರೆ ನಮ್ಮ ಖಾತೆಯಲ್ಲಿರುವ ದುಡ್ಡಿನ ಒಂದಿಷ್ಟು ಭಾಗವನ್ನು ಠೇವಣಿ ಖಾತೆ ತೆರೆಯುವುದರ ಮೂಲಕ ನಿಗದಿತ ಸಮಯದವರೆಗೆ ಬಡ್ಡಿದರಗಳನ್ನು ತಿಳಿದುಕೊಂಡು ಠೇವಣಿ ಇಡಬಹುದು.  ಬ್ಯಾಂಕಿನ ವ್ಯವಸ್ಥೆ ಮತ್ತು ನಿಯಮಗಳ ಅನುಸಾರ ಹಣ ಬೇಕೆಂದಾಗ ಠೇವಣಿ ಖಾತೆಗಳನ್ನು ಮುಚ್ಚಬಹುದು.  ಹೀಗೆ ಕೆಲವೇ ನಿಮಿಷಗಳಲ್ಲಿ ಠೇವಣಿ ಖಾತೆಯನ್ನು ತೆಗೆಯುವುದು ಮತ್ತು ಬೇಡವಾದಾಗ ಮುಚ್ಚಬಹುದು.  ಅದೇ ತರಹ ಪುನರಾವರ್ತಿಸುವ ಠೇವಣಿ ಖಾತೆಗಳನ್ನು ಸ್ವಯಂ ನೀವೇ ತೆರೆಯಬಹುದು.


ಕಾರ್ಡುಗಳ ನಿರ್ವಹಣೆ

ಡೆಬಿಟ್ ಕಾರ್ಡ್ (ATM /Debit card) ಮತ್ತು ಕ್ರೆಡಿಟ್ ಕಾರ್ಡ್ (Credit card) ವಿವರಗಳನ್ನು ಕಾರ್ಡ್ ವಿಭಾಗದಿಂದ ತಿಳಿದುಕೊಳ್ಳಬಹುದು.  ಇತ್ತೀಚೆಗೆ ನೀವು ಮಾಡಿರುವ ವ್ಯವಹಾರಗಳ ಮಾಹಿತಿ, ನಂಬರ್, ಕಾರ್ಡ್ ಗೆ ನಮೂದಿಸಲಾಗಿರುವ ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವಿಳಾಸ ಮತ್ತು ಇತರೆ ವಿವರಗಳು ಇಲ್ಲಿ ಸಿಗುತ್ತವೆ.   PIN ಬದಲಾವಣೆ ಮಾಡುವ ಆಯ್ಕೆಯು ಲಭ್ಯ ಇರಬಹುದು.  ಇತರೆ ಕಾರ್ಡುಗಳ ಕುರಿತ ಕೆಲವು ವಿಚಾರಗಳನ್ನು ನಿಯಂತ್ರಿಸಬಹುದು.  ಉದಾಹರಣೆಗೆ, ಕಾರ್ಡ್ ಬ್ಲಾಕ್ ಮಾಡಬಹುದು, ಹೊಸ ‍ಕಾರ್ಡ್ ಪಡೆಯಲು ವಿನಂತಿಸಬಹುದು ಕಾರ್ಡ್ ಉಪಯೋಗಿಸಿಕೊಂಡು ಮಾಡುವ ವ್ಯವಹಾರಗಳ ಗರಿಷ್ಠ ಮೊತ್ತವನ್ನು ನಿಗದಿ ಮಾಡಬಹುದು.  ಕ್ರೆಡಿಟ್ ‍ಕಾರ್ಡ್ ಉಪಯೋಗಿಸುತ್ತೀರಿ ಎಂದಾದರೆ ಅದರ ಸಂ‍ಪೂರ್ಣ ಮಾಹಿತಿ ತಿಳಿಯಬಹುದು.  ಕ್ರೆಡಿಟ್ ಕಾರ್ಡುಗಳ (Credit card) ಬಿಲ್ ಪಾವತಿಯನ್ನು ಮಾಡಬಹುದು.

ಸಾಲದ ವಿವರ (Loan)

     ಸಾಲದ ಖಾತೆಗಳಿದ್ದರೆ ಅವುಗಳು ಕೂಡ ನಿಮ್ಮ ಖಾತೆಯೊಂದಿಗೆ ಜೋಡಣೆಯಾಗಿರುತ್ತದೆ.  ಸಾಲದ  ವಿಭಾಗದಲ್ಲಿ ಸಾಲದ ಮೊತ್ತ, ಕಟ್ಟಬೇಕಾಗಿರುವ ಬಾಕಿ, ಬಡ್ಡಿದರ ಇದುವರೆಗೂ ಕಟ್ಟಿರುವ ಕಂತುಗಳ ವಿವರ ಮತ್ತು ಇತರೆ ಮಾಹಿತಿ ಇರುತ್ತದೆ.  ಸಾಲದ ಖಾತೆಯ ವ್ಯವಹಾರಗಳ ಸ್ಟೇಟ್ ಮೆಂಟ್ ಅನ್ನು (Statement) ನೀವು ಡೌನ್ ಲೋಡ್ (Download) ಮಾಡಿಕೊಳ್ಳಬಹುದು.  ಹಾಗೆಯೇ ಹೊಸ ಸಾಲ ಬೇಕಿದ್ದರೆ ಅದನ್ನು ಕೂಡ ಇಲ್ಲಿಂದಲೇ ವಿನಂತಿಸಿಕೊಳ್ಳ ಬಹುದು. 

ಇತರ ಸೇವೆಗಳು:

     ಹೊಸ ಚೆಕ್ ಪುಸ್ತಕಕ್ಕಾಗಿ (Cheque book) ವಿನಂತಿಸಿಕೊಳ್ಳಬಹುದು, ವಿವಿಧ ರೀತಿಯ ‍ಅರ್ಜಿ ಫಾ‍ರ್ಮಗಳನ್ನು ಡೌನ್ ಲೋಡ್ (Download) ಮಾಡಿಕೊಳ್ಳಬಹುದು, ಗ್ರಾಹಕ ಸೇವಾ ಮಾಹಿತಿ ತಿಳಿಯಬಹುದು, ಇನ್ನೂ ಹತ್ತು ಹಲವಾರು ಸೇವೆಗಳು ಲಭ್ಯವಿರುತ್ತವೆ.  ವಿವಿಧ ಬ್ಯಾಂಕುಗಳ ನೆಟ್ ಬ್ಯಾಂಕಿಂಗ್ ಅಂ‍ತರ್ಜಾಲದ ವೈಶಿಷ್ಟ್ಯತೆಗಳ ಪ್ರಕಾರ ಹಲವು ವಿಭಿನ್ನ ರೀತಿಯ ಸೇವೆಗಳು ಇರುತ್ತವೆ. 

ಮೊಬೈಲ್ ಬ್ಯಾಂಕಿಂಗ್ (Mobile Banking):

ನೆಟ್ ಬ್ಯಾಂಕಿಂಗ್ ಮಾಡಲು ಕಂಪ್ಯೂಟರ್ ಅವಶ್ಯಕ.  ಮೊಬೈಲ್ ನಲ್ಲಿರುವ ಬ್ರೌಸರ್ ಬಳಸಿಯೂ ಬ್ಯಾಂಕಿಂಗ್ ಮಾಡಬಹುದು.  ಆದರೆ ಅದು ಅಷ್ಟು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು, ಆಯ್ಕೆಗಳನ್ನು ಆರಿಸಿಕೊಳ್ಳಲು, ಇತರೆ ಚಟುವಟಿಕೆಗಳಿಗೆ ಅಷ್ಟು ಅನುಕೂಲಕರ ಅನಿಸುವುದಿಲ್ಲ.  ಈಗೆಲ್ಲಾ ಅಪ್ಲಿಕೇಶನ್ ಗಳ (Applications) ಸಹಾಯದಿಂದ ಮೊಬೈಲ್ ಬ್ಯಾಂಕಿಂಗ್ ಕೂಡ ಮಾಡಬಹುದು.  ಅಂದರೆ ಬ್ಯಾಂಕುಗಳ ಮೊಬೈಲ್ ಬ್ಯಾಂಕಿಂಗ್ ಸಲುವಾಗಿ ಅಪ್ಲಿಕೇಶನ್ ಗಳನ್ನು ತಯಾರಿ ಮಾಡಿರುತ್ತಾರೆ.  ನಮ್ಮ ಖಾತೆಯ ಅನುಸಾರ ಬ್ಯಾಂಕಿನ ಅಪ್ಲಿಕೇಶನ್ ಅನ್ನು ಡೌನ್ ಲೋಡ್ (Download) ಮಾಡಿಕೊಂಡು, ನೋಂದಣಿ ಮಾಡಿ, ಮೊಬೈಲ್ ಬ್ಯಾಂಕಿಂಗ್ ಸಹ ಬಳಸಬಹುದು.  ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ (Password) ಅಥವಾ  PIN  ಅನ್ನು ಬೇರೆಯೇ ಇಡಬೇಕು. ನೆಟ್ ಬ್ಯಾಂಕಿಂಗ್ ನಲ್ಲಿ ಮಾಡಬಹುದಾದ ಹಲವಾರು ಚಟುವಟಿಕೆಗಳನ್ನು ನೀವು ಮೊಬೈಲ್ ಬ್ಯಾಂಕಿಂಗ್ ಉಪಯೋಗಿಸಿಕೊಂಡು ಮಾಡಬಹುದು. ಇತ್ತೀಚೆಗೆ ಬಂದಿರುವ ವೈಶಿಷ್ಟ್ಯತೆಯನ್ನು ಉಪಯೋಗಿಸಿಕೊಂಡು ಫಿಂಗರ್ ಪ್ರಿಂಟ್ (Finger print) ಸಹಾಯದಿಂದಲೂ ನೀವು ಮೊಬೈಲ್ ಬ್ಯಾಂಕಿಂಗ್ ಲಾಗಿನ್ (Login) ಆಗಬಹುದು.


ಬ್ಯಾಂಕ ಖಾತೆಯ ವ್ಯವಹಾರ ವಿವರಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ ಬ್ಯಾಂಕ ಖಾತೆಯ ವ್ಯವಹಾರ ವಿವರಗಳ ಬಗ್ಗೆ ಮಾಹಿತಿ  ತಿಳುದಿಕೊಳ್ಳಿ Reviewed by Admin on ಸೆಪ್ಟೆಂಬರ್ 28, 2023 Rating: 5

ಕಾಮೆಂಟ್‌ಗಳಿಲ್ಲ