ಕಂಪ್ಯೂಟರ್ ಸಂಯೋಜನೆ ಕುರಿತು ಮಾಹಿತಿ
ಕಂಪ್ಯೂಟರ್ ಸಂಯೋಜನೆಗಳು (Computer Settings)
ಪ್ರತಿಯೊಂದು ತಂತ್ರಜ್ಞಾನ ಆಧಾರಿತ ಉತ್ಪನ್ನಗಳಂತೆ ಕಂಪ್ಯೂಟರ್ ಕೂಡ ಮೂಲದಲ್ಲಿಯೇ ಕೆಲವೊಂದು ಸಂಯೋಜನೆಗಳೊಂದಿಗೆ (Default Settings) ಬಂದಿರುತ್ತದೆ. ಅವುಗಳನ್ನು ನಮಗೆ ಬೇಕಾದ ಹಾಗೆ ಬದಲಾಯಿಸಿ ಕೆಲಸವನ್ನು ಸುಲಭವಾಗಿ ಮಾಡಬಹುದು. ಇಲ್ಲಿ ನಾವು ಕೆಲವೊಂದು ಪ್ರಮುಖ ಸೆಟ್ಟಿಂಗ್ಸ್ ಕುರಿತು ತಿಳಿಯೋಣ. (WINDOWS 10) ಪ್ರಕಾರ: ಸ್ಟಾರ್ಟ ಬಟನ್ ದಿಂದ ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಬಹುದು. ಸಿಸ್ಟಮ್ ಸೆಟ್ಟಿಂಗ್ಸ್ (System settings) ಈ ಸಂಯೋಜನೆಗಳ ಮೂಲಕ ನೀವು ಗಣಕಯಂತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ನಿಯಂತ್ರಿಸಬಹುದು.
ಪ್ರದರ್ಶನ (Display): ನಿಮಗೆ ಬೇಕಾದಷ್ಟು ಪ್ರಕಾಶಮಾನವನ್ನು (Brightness) ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ನೆನಪಿರಲಿ, ಹೆಚ್ಚು ಪ್ರಕಾಶಮಾನವನ್ನು ಆಯ್ಕೆ ಮಾಡಿಕೊಂಡಾಗ ಕಣ್ಣಿಗೆ ತೊಂದರೆ ಆಗಬಹುದು ಮತ್ತು ಬ್ಯಾಟರಿ ಬೇಗ ಖಾಲಿ ಆಗಬಹುದು. ಫಾಂಟ್ ಅಳತೆ, ಪ್ರದರ್ಶನದ ಅಳತೆ (Resoultion), ಪ್ರದರ್ಶನ ದೃಷ್ಟಿಕೋನ (Display orientation) ಇತರೆ ಪ್ರದರ್ಶನಕ್ಕೆ ಅನೂಕೂಲವಾಗುವ ಆಯ್ಕೆಗಳನ್ನು ಆರಿಸಬಹುದು.ಧ್ವನಿ: ಧ್ವನಿ ಸಂಯೋಜನೆಯ ಮೂಲಕ ಧ್ವನಿಯ ಪರಿಣಾಮ (Volume) ನಿಯಂತ್ರಿಸಬಹುದು. ಅಷ್ಟೇ ಅಲ್ಲದೆ ಧ್ವನಿ ವರ್ಧಕ ಮತ್ತು ಮೈಕ್ ಸರಿಯಾಗಿ ಇದೆಯಾ ಇಲ್ಲವಾ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ನೋಟಿಫಿಕೇಷನ್ಸ್ (Notifications): ಮೊಬೈಲ್ ನಲ್ಲಿ ಬರುವಂತೆ ಕಂಪ್ಯೂಟರ್ ನಲ್ಲಿಯೂ ವಿವಿಧ ರೀತಿಯ ನೋಟಿಫಿಕೇಷನ್ಸ್ ಗಳು ಬರುತ್ತವೆ. ಈ ಸಂಯೋಜನೆಯ ಮೂಲಕ ಯಾವ ಯಾವ ರೀತಿಯ ನೋಟಿಫಿಕೇಷನ್ಸ್ ತೋರಿಸಬೇಕು ಅನ್ನುವುದನ್ನು ನಿಯಂತ್ರಿಸಬಹುದು.
ನಿದ್ರಾವಸ್ಥೆ (Sleep Mode): ಇದರ ಮೂಲಕ ವಿದ್ಯುಚ್ಛಕ್ತಿಯ ಬಳಕೆ ಮತ್ತು ಬ್ಯಾಟರಿ ಬಳಕೆಯನ್ನು ನಿಯಂತ್ರಿಸಬಹುದು.
ಸಾಧನ ಸೆಟ್ಟಿಂಗ್ಸ್ ಗಳು (Device Settings): ಸಂಯೋಜನೆಗಳ ಮೂಲಕ ಕಂಪ್ಯೂಟರ್ ಗೆ ಸಂಪರ್ಕಿಸಬಹುದಾದ ಹಲವು ರೀತಿಯ ಸಾಧನಗಳ ಬಗ್ಗೆ, ಅವುಗಳ ಸಮರ್ಪಕ ಮಾಹಿತಿ, ಸ್ಥಿತಿ ಗತಿ, ಹೀಗೆ ವಿವಿಧ ಮಾಹಿತಿ ಸಿಗುತ್ತದೆ. ಆ ಮಾಹಿತಿ ಆಧಾರದ ಮೇಲೆ ಅವುಗಳ ಮೇಲೆ ನಿಗಾ ಇರಿಸಿ, ಕೆಲಸ ಮಾಡಬಹುದು.
ಜಾಲ ಮತ್ತು ಅಂತರ್ಜಾಲ (Network and Internet)
ನಿಮ್ಮ ಕಂಪ್ಯೂಟರ್ ನ್ನು ಜಾಲದ (Network) ಮೂಲಕ ಬೇರೆ ಸಾಧನಗಳಿಗೆ ಸಂರ್ಪಕಿಸುವ ಮತ್ತು ವಿವಿಧ ರೀತಿಯ ಅಂರ್ತಜಾಲ (Internet) ಸಂಪರ್ಕ ಆಯ್ಕೆಗಳ ಬಗ್ಗೆ ಮಾಹಿತಿ ಮತ್ತು ಸ್ಥಿತಿ ಗತಿ ಇಲ್ಲಿಂದ ತಿಳಿಯಬಹುದು. ಸದ್ಯ ಕಂಪ್ಯೂಟರ್ ಯಾವ ಜಾಲ ಮತ್ತು ಅಂತರ್ಜಾಲಕ್ಕೆ (Internet) ಸಂಪರ್ಕವಾಗಿದೆ ಎಂದು ತಿಳಿಯಬಹುದು. ಅಂತರ್ಜಾಲ ವಿಭಾಗದಲ್ಲಿ ಕಂಪ್ಯೂಟರ್ ಯಾವ ವಿಧವಾದ ಸೇವೆಯನ್ನು ಬಳಸಿಕೊಂಡು ಅಂತರ್ಜಾಲಕ್ಕೆ ಸಂಪರ್ಕ ಸಾಧಿಸಿದೆ ಮತ್ತು ವೈಫೈಗೆ (Wi-Fi) ಸಂಪರ್ಕ ಮಾಡಿರುವಿರಾ? ಇಲ್ಲವಾ? ಎಂಬುದು ಗೊತ್ತಾಗುತ್ತದೆ. ಬ್ಲ್ಯೂಟೂಥ್ ಮೂಲಕ ಅಂತರ್ಜಾಲ ಸಂಪರ್ಕವನ್ನು ಮತ್ತು ಮೊಬೈಲ್ ನ್ನು ಬಳಸಿ ಹಾಟ್ ಸ್ಪಾಟ್ ಸಂಪರ್ಕ (Hotspot) ಮಾಡಿ ಗಣಕಯಂತ್ರದೊಂದಿಗೆ ಅಂತರ್ಜಾಲವನ್ನು ಬಳಸಬಹುದು. ಹಾಗೆಯೇ ಲ್ಯಾನ್ (LAN) ಮೂಲಕವೂ ಅಂತರ್ಜಾಲ ಸಂಪರ್ಕವನ್ನು ಸಾಧಿಸುವ ಆಯ್ಕೆಯು ಇಲ್ಲಿರುತ್ತದೆ. ಏರ್‌ಪ್ಲೇನ್ ಮೋಡ್ ಕೂಡ ಆಯ್ಕೆ ಮಾಡಬಹುದು. ಅಲ್ಲದೇ ನಿಮ್ಮ ಕಂಪ್ಯೂಟರ್ ಎಷ್ಟು ಡೇಟಾವನ್ನು (Data) ಬಳಸಿದೆ ಮತ್ತು ಯಾವ ಅಪ್ಲಿಕೇಶನ್ ಎಷ್ಟು ಡೇಟಾ ಸೇವೆಯನ್ನು ಬಳಸಿದೆ ಎಂಬುದನ್ನು ನಿಯಂತ್ರಿಸಬಹುದು.
ವೈಯಕ್ತಿಕರಣ ಸಂಯೋಜನೆಗಳು: ಈ ವಿಭಾಗದ ಸಂಯೋಜನೆಗಳಿಂದ ನೀವು ನಿಮ್ಮ ಕಂಪ್ಯೂಟರ್ನಲ್ಲಿ ಬೇಕಾದ ಚಿತ್ರ ಫಾಂಟ್ಸ್, ಬಣ್ಣಗಳು, ಥೀಮ್ ಗಳು ಮತ್ತು ಗಣಕಯಂತ್ರ ಶುರು (On) ಮಾಡಿದ ನಂತರ ನೀವು ಏನನ್ನೂ ನೋಡಲು ಬಯಸುತ್ತಿರಿ ಎನ್ನುವ ಇತರ ಆಯ್ಕೆಗಳನ್ನು ಇಲ್ಲಿಂದ ಮಾಡಬಹುದು. ಹಾಗೆಯೇ ಆಯ್ಕೆಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಿಸಬಹುದು.
ಖಾತೆಗಳ ಸಂಯೋಜನೆಗಳು (Account Settings): ಈಗ ಸಂಯೋಜನೆಗಳ ಸಹಾಯದಿಂದ ನಿಮ್ಮ ಖಾತೆ ಬಗ್ಗೆ ಮಾಹಿತಿಯನ್ನು ತಿಳಿಯಬಹುದು. ಮತ್ತು ಕೆಲ ಮಾಹಿತಿಯನ್ನು ಸೇರಿಸಬಹುದು. ಉದಾಹರಣೆಗೆ ನಿಮ್ಮ ಭಾವಚಿತ್ರ, ಇಮೇಲ್ ಖಾತೆಗಳು, ವಿವಿಧ ರೀತಿಯ ಸಂಯೋಜನೆಗಳು ಗಣಕಯಂತ್ರವನ್ನು ಅನ್ ಲಾಕ್ ಮಾಡಲು ಬಯಸುವ ವಿವಿಧ ವಿಧಾನಗಳು ಮತ್ತು ಅವುಗಳ ಪಾಸ್ ವರ್ಡ್ (Password) ಸಂಯೋಜನೆಗಳು ಲಭ್ಯವಿರುತ್ತವೆ. ಅಷ್ಟೇ ಅಲ್ಲದೆ ,ನೀವು ಮತ್ತೊಬ್ಬರಿಗೆ ನಿಮ್ಮ ಗಣಕಯಂತ್ರವನ್ನು ಬಳಸಲು ನೀಡುತ್ತೀರಿ ಎಂದರೆ ಅವರಿಗೂ ಕೂಡ ನಿಮ್ಮ ಗಣಕಯಂತ್ರವನ್ನು ಉಪಯೋಗಿಸಲು ಬೇರೆ ಖಾತೆಯನ್ನು ತೆರೆದು ಕೊಡಬಹುದು. ಇದರಿಂದ ನಿಮ್ಮ ಕಡತಗಳನ್ನು ಅವರು ಬದಲಾವಣೆ ಮಾಡಲು ಆಗುವುದಿಲ್ಲ. ಹಾಗೆಯೇ ಅವರು ಮಾಡಿರುವ ಕಡತಗಳನ್ನು ನೋಡಬಹುದು ಮತ್ತು ಬದಲಾವಣೆ ಮಾಡಬಹುದು. ನೀವು ನಿಮ್ಮ ಗಣಕಯಂತ್ರದ ಆಡಳಿತ ಬಳಕೆದಾರರ (Admin User) ಇರುವ ಕಾರಣ ಅವರ ಮಾಹಿತಿಯನ್ನು ನೋಡಬಹುದು.
ಸಮಯ ಮತ್ತು ಭಾಷೆಯ ಸಂಯೋಜನೆಗಳು (Time and Launguage): ನಾವು ಗಣಕಯಂತ್ರವನ್ನು ಪ್ರಪಂಚದ ಯಾವ ಭಾಗದಲ್ಲಿ ಬಳಸುತ್ತಿದ್ದೇವೆ ಎಂದು ನಮೂದಿಸಬಹುದು ಮತ್ತು ಅಲ್ಲಿನ ಕಾಲಮಾನವನ್ನು (Time Zone) ಆಯ್ಕೆ ಮಾಡಬಹುದು. ಹಾಗೆಯೇ ಗಣಕಯಂತ್ರವನ್ನು ವಿವಿಧ ಭಾಷೆಗಳಲ್ಲಿ ಕಾರ್ಯ ನಿರ್ವಹಿಸಲು ಸಮರ್ಥವಿರುವುದರಿಂದ ಲಭ್ಯವಿರುವ ಭಾಷೆಗಳಲ್ಲಿ ನಿಮಗೆ
ಬೇಕಾದ ಭಾಷೆಯನ್ನು ಆಯ್ಕೆ ಮಾಡಬಹುದು. ಇದರಿಂದ ಆಯ್ಕೆ ಮಾಡಿದ ಭಾಷೆಯಲ್ಲಿ ಎಲ್ಲಾ ಮಾಹಿತಿಯನ್ನು ಪರದೆ ಮೇಲೆ ನೋಡಬಹುದು.
ನವೀಕರಣ ಮತ್ತು ಭದ್ರತಾ ಸಂಯೋಜನೆಗಳು (Renewation & Security Settings): ಈ ಸಂಯೋಜನೆಗಳ ಸಹಾಯದಿಂದ ನಾವು ಕಂಪ್ಯೂಟರ್ನ ಒಳಗೆ ಕಾರ್ಯನಿರ್ವಹಿಸುವ ಆಪರೇಟಿಂಗ್ ಸಿಸ್ಟಮ್ ಮತ್ತು ಇನ್ನು ಹಲವು ಸಾಫ್ಟವೇರ್ ಗಳ ನವೀಕರಣವನ್ನು ಮಾಡಬಹುದು. ಅಷ್ಟೇ ಅಲ್ಲದೆ ಕಂಪ್ಯೂಟರ್ನ ಸಮಸ್ಯೆಗಳನ್ನು ತಿಳಿಯಬಹುದು ಹಾಗೂ ಅವುಗಳ ಕಾರಣವನ್ನು ಹುಡುಕಬಹುದು. ನಿಮಗೆ ಬೇಕಾಗಿರುವ ಮುಖ್ಯ ಡೇಟಾವನ್ನು ಕೂಡ ಮಾಡಬಹುದು. ಭದ್ರತಾ ಯೋಜನೆಗಳಲ್ಲಿ ನಿಮ್ಮ ಕಂಪ್ಯೂಟರ್ನ ಭದ್ರತಾ ವ್ಯವಸ್ಥೆ ಈಗ ಹೇಗಿದೆ ಮತ್ತು ಯಾವುದಾದರೂ ಭದ್ರತಾ ಲೋಪಗಳಿವೆಯೇ ಎಂಬುದನ್ನು ತಿಳಿಯಬಹುದು. ಭದ್ರತೆ ಸಂಯೋಜನೆಗಳ ನಿಯಂತ್ರಣದಿಂದ ನಿಮ್ಮ ಕಂಪ್ಯೂಟರ್ನ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಶಕ್ತರಾಗುತ್ತಿರಿ.
Reviewed by Admin
on
ಸೆಪ್ಟೆಂಬರ್ 26, 2023
Rating:


ಕಾಮೆಂಟ್‌ಗಳಿಲ್ಲ